ಕರ್ನಾಟಕ ಸರ್ಕಾರ

ಮುಖ್ಯಮಂತ್ರಿಗಳ ಪರಿಹಾರ ನಿಧಿ

ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಕುರಿತು:-

  • ಮುಖ್ಯಮಂತ್ರಿಗಳ ಪರಿಹಾರ ನಿಧಿಯು ಸರ್ಕಾರದ ಆದೇಶ ಸಂಖ್ಯೆ ಎಫ್.ಡಿ. 103 ಎ.ಸಿ.ಪಿ 58ರಂತೆ ದಿನಾಂಕ: 3ನೇ ಡಿಸೆಂಬರ್ 1958ರಂತೆ ಸ್ಥಾಪಿತಗೊಂಡಿದ್ದು, ನಿಯಮಗಳು ಸರ್ಕಾರದ ಆದೇಶ ಸಂಖ್ಯೆ: ಎಫ್.ಡಿ. 35 ಬಿ.ಎಂ.ಎಸ್. 78 ದಿನಾಂಕ: 12ನೇ ಸೆಪ್ಟಂಬರ್ 1978 ರಂದು ರಚನೆಗೊಂಡಿರುತ್ತದೆ.
  • ಮುಖ್ಯಮಂತ್ರಿಗಳಿಗೆ ಪ್ರದತ್ತವಾಗಿರುವ ವಿವೇಚನ ಅಧಿಕಾರದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಮಂಜೂರು ಮಾಡಲಾಗುತ್ತಿದೆ.
  • ಸಾರ್ವಜನಿಕರು, ಸಂಘ-ಸಂಸ್ಥೆಗಳು, ನಿಗಮ-ಮಂಡಳಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸುವ ದೇಣಿಗೆಯ ಮೊತ್ತವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಆದಾಯ ಮೂಲವಾಗಿದ್ದು, ಸರ್ಕಾರದ ವಾರ್ಷಿಕ ಆಯ-ವ್ಯಯದಲ್ಲಿ ಯಾವುದೇ ಅನುದಾನವು ನಿಗಧಿಯಾಗಿರುವುದಿಲ್ಲ ಈ ರೀತಿ ಸಲ್ಲಿಕೆಯಾಗುವ ದೇಣಿಗೆಯ ಮೊತ್ತಕ್ಕೆ ಆದಾಯ ತೆರಿಗೆ ಇಲಾಖೆಯ ವತಿಯಿಂದ ಶೇ 100ರಷ್ಟು ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.
ಪ್ರಸ್ತುತ ಈ ಕೆಳಕಂಡ ಪ್ರಕರಣಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಹಾರ ಬಿಡುಗಡೆ ಮಾಡಲಾಗುತ್ತಿದೆ.
  • ಕಡುಬಡತನದಲ್ಲಿ ಜೀವನ ಮಾಡುತ್ತಿರುವವರಿಗೆ
  • ಬಡ ಜನರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ
  • ನಿರುದ್ಯೋಗಿಗಳಿಗೆ
  • ದಿವ್ಯಾಂಗರಿಗೆ
  • ಕುಟುಂಬದ ದುಡಿಯುವ ವ್ಯಕ್ತಿಯು ಅಪಘಾತದಲ್ಲಿ ಆಕಾಲಿಕ ಮರಣ ಹೊಂದಿದಲ್ಲಿ ನಿರ್ಗತಿಕರಾಗುವ ಕುಟುಂಬದವರಿಗೆ.
  • ಆಕಸ್ಮಿಕ ದರ್ಘಟನೆಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳು, ಪ್ರದತ್ತವಾಗಿರುವ ವಿವೇಚನಾನುಸಾರ ಘೋಷಿಸುವ ಪರಿಹಾರದ ಮೊತ್ತವನ್ನು ನೊಂದ ಕುಟುಂಬದವರಿಗೆ ವಿತರಿಸಲಾಗುತ್ತಿದೆ

ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಡ, ನಿರ್ಗತಿಕ ಜನರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಬಹುಪಾಲು ಪರಿಹಾರ ಒದಗಿಸಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು ಸಂಘ-ಸಂಸ್ಥೆಗಳು, ನಿಗಮ-ಮಂಡಳಿಗಳು ನೀಡುವ ದೇಣಿಗೆಯ ಮೊತ್ತದಿಂದ ಪರಿಹಾರದ ಕಾರ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ. ಈ ರೀತಿ ಸಾರ್ವಜನಿಕರು ನೀಡುವ ದಾನದ ಮೊತ್ತದಲ್ಲಿ ದುರುಪಯೋಗ ಆಗದಂತೆ ತಡೆಯಲು ಕೆಲವೊಂದು ಷರತ್ತು ಬದ್ಧ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿರುತ್ತದೆ. ಅಂತಹ ಷರತ್ತುಗಳು ಈ ಕೆಳಕಂಡಂತೆ ಇರುತ್ತವೆ.

  • ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳೆಂದು ಗುರುತಿಸಲು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ವ್ಯಕ್ತಿಗಳ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತಿದೆ.
  • ಅರ್ಜಿದಾರರು ಚಿಕಿತ್ಸೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಹಾಗೂ ಇತರೇ ಯೋಜನೆಗಳಲ್ಲಿ ಸೌಲಭ್ಯವನ್ನು ಪಡೆದು ಮತ್ತೊಮ್ಮೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲು ಅತಿಯಾಸೆಯಿಂದ ಸೌಲಭ್ಯ ಪಡೆಯಲು ಯತ್ನಿಸುವ ಪ್ರಕರಣಗಳನ್ನು ತಡೆಗಟ್ಟಲು ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂತಿಮ ಮೂಲ ಬಿಲ್ಲುಗಳನ್ನು ಹಾಗೂ ಬಿಡುಗಡೆ ಸಾರಾಂಶ ಪತ್ರವನ್ನು ಪಡೆಯಲಾಗುತ್ತಿದೆ. ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಪಡೆಯಲಾಗುತ್ತಿದೆ.
  • ಇನ್ನಿತರೇ ದುರ್ಘಟನೆಗಳಿಗೆ ಸಂಬಂಧಿಸಿದಂತೆ ಅಥವಾ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿಲ್ಲದ ಬಡ ಜನರ ಮಾರಣಾಂತಿಕ ಕಾಯಿಲೆಯ ಚಿಕಿತ್ಸಾ ವೆಚ್ಚಕ್ಕೆ ಪರಿಹಾರ ಒದಗಿಸಲು ನಿಯಮವನ್ನು ರೂಪಿಸಲಾಗಿದ್ದು, ಅರ್ಜಿದಾರರ ಆರ್ಥಿಕ ಸ್ಥಿತಿಯ ಬಗ್ಗೆ ಹಾಗೂ ಅವರು ಅನುಭವಿಸುತ್ತಿರುವ ಯಾತನೆಯ ಬಗ್ಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ನಿಗಧಿತ ದಾಖಲೆಗಳೊಂದಿಗೆ ವರದಿ ಸಲ್ಲಿಸಿದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಸಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
  • ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಸಾಮಾನ್ಯ ಜನರು ಅರ್ಜಿ ಸಲ್ಲಿಸಿ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಲು ಹಾಗೂ ಅರ್ಹ ಅರ್ಜಿದಾರರಿಗೆ ಶೀಘ್ರಗತಿಯಲ್ಲಿ ಪರಿಹಾರವನ್ನು ಒದಗಿಸಲು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ವಿದ್ಯುನ್ಮಾನದ ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತಿದೆ. ಅರ್ಜಿಯ ವಿಲೇವಾರಿಯ ಹಂತಗಳ ಮಾಹಿತಿಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ರವಾನಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯು ಸರ್ಕಾರದ ನಂಬಿಕಸ್ಥ ಶಾಖೆಯಾಗಿದ್ದು, ನೈಸರ್ಗಿಕ ಪ್ರಕೃತಿ ವಿಕೋಪಗಳಾದಂತಹ ಸಂದರ್ಭಗಳಲ್ಲಿ ನೊಂದ ಸಂತ್ರಸ್ತರಿಗೆ ಹಾಗೂ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸ್ವಇಚ್ಚೆಯಿಂದ ನೀಡುವ ದೇಣಿಗೆಯನ್ನು ಸಂಗ್ರಹಿಸಿ ತುರ್ತು ಅಗತ್ಯ ಯೋಜನೆಗಳಿಗೆ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಲು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ಒಂದು ಸೂಕ್ತ ವೇದಿಕೆಯಾಗಿದೆ.